ದುಸ್ಸಹ
ಮೃತ್ಯುಪುತ್ರರಲ್ಲಿ ಒಬ್ಬ. ಮಾರ್ಕಂಡೇಯ ಪುರಾಣದಲ್ಲಿ ಈತನ ಉಲ್ಲೇಖವಿದೆ. ಈತನಿಗೆ ಮಿತಿಮೀರಿದ ಹಸಿವು. ಇವನ ಧ್ವನಿ ಕೂಗಾಟ ಕಾಗೆಗಳ ಕೂಗಿನಂತೆ ಕರ್ಕಶ. ರೂಪವೋ ಅತಿ ಭಯಂಕರ. ದಿಗಂಬರನಾದ ಈತ ಯಾವಾಗಲೂ ತಲೆ ತಗ್ಗಿಸಿಯೇ ಇರುತ್ತಿದ್ದ. ತಮೋಗುಣಕ್ಕೆ ತವರೂರಾದ ಈತನನ್ನು ಕುರಿತು ಬ್ರಹ್ಮ - ಜಗತ್ತನ್ನೇ ಹಾಳುಮಾಡಬೇಡ, ಕೋಪವನ್ನೂ ತಾಮಸವೃತ್ತಿಯನ್ನೂ ಬಿಟ್ಟು ಶಾಂತನಾಗು-- ಎಂದು ಹೇಳಲು ದುಸ್ಸಹ ತಾನು ಮಿತಿ ಮೀರಿದ ಹಸಿವು ನೀರಡಿಕೆಗಳಿಂದÀ ಬಳುತ್ತಿರುವುದಾಗಿಯೂ ತನಗೆ ತೃಪ್ತಿಯಾಗುವ ಬಗೆಯನ್ನು ವಿವರಿಸಬೇಕೆಂದೂ ಕೇಳಿಕೊಂಡ. ಅಧಾರ್ಮಿಕ ವೃತ್ತಿಯಲ್ಲಿ ನಡೆಯುವವನ ಮನೆಯೇ ನಿನ್ನ ಮನೆ. ಅವನ ಕರ್ಮೋಲ್ಲಂಘನೆಯಿಂದ ನಿನ್ನ ದೇಹ ಪುಷ್ಟಿಯಾಗುವುದು. ಹಳಸಿದ, ಕೊಳೆತುನಾರುವ, ಬೇಯಿಸದ, ಅಪವಿತ್ರವಾದ, ಅಶುಚಿಯಾದ, ಒಡಕುಪಾತ್ರೆಯಲ್ಲಿಟ್ಟ, ಎಂಜಲಾದ ಪದಾರ್ಥಗಳೆಲ್ಲವೂ ನಿನಗೆ ಆಹಾರ, ಧರ್ಮಕ್ಕೆ ವಿರುದ್ಧವಾದ ಕರ್ಮಗಳಿಂತ ಬರುವ ಫಲಗಳು ನಿನಗೆ ತೃಪ್ತಿಕೊಡುವುವು ಎಂದು ವಿವರಿಸಿ ಬ್ರಹ್ಮ ಅಂತರ್ಧಾನನಾದ. ದುಸ್ಸಹ ಇವುಗಳಿಂದ ತೃಪ್ತಿ ಹೊಂದಿ ಸುಖವಾಗಿದ್ದ.

ಈತನ ಹೆಂಡತಿ ನಿರ್ಮಾಷ್ರ್ಟಿ ಕಲಿಪುರುಷರ ಮಗಳು. ಇವರಿಗೆ ಎಂಟು ಮಂದಿ ಗಂಡು ಎಂಟು ಮಂದಿ ಹೆಣ್ಣು ಹೀಗೆ ಒಟ್ಟು 16 ಜನ ಮಕ್ಕಳು.

ಧೃತರಾಷ್ಟ್ರನ ಮಗನೊಬ್ಬನಿಗೂ ದುಸ್ಸಹನೆಂಬ ಹೆಸರು. ಈತ ಮಹಾಭಾರತ ಯುದ್ಧದಲ್ಲಿ ಭೀಮನಿಂದ ಹತನಾದ.
       								     (ಎಸ್.ಆರ್.ಎಂ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ